ಆಮೆ
ಸರೀಸೃಪಗಳ ವರ್ಗಕ್ಕೆ ಸೇರಿದ ಈ ಪ್ರಾಣಿಗಳಿಗೆ ಇಂಗ್ಲಿಷಿನಲ್ಲಿ ಟಾಟಾಯ್ಸ್, ಟರ್ಟಲ್, ಟೆರ್ರಾಪಿನ್ ಎಂಬ ಹೆಸರುಗಳಿವೆ; ಸಂಸ್ಕøತದಲ್ಲಿ ಕೂರ್ಮ. ಮೊದಲನೆಯ ಪದ ಟಾರ್ಟಾಯ್ಸ್ ಎಂದರೆ ಫ್ರೆಂಚ್ ಭಾಷೆಯಲ್ಲಿ ತಿರುಚಿದ್ದು ಎಂದರ್ಥ. ಈ ಪ್ರಾಣಿಯ ಕಾಲುಗಳು ವಿಚಿತ್ರವಾಗಿ ಬಗ್ಗಿರುವುದರಿಂದ ಈ ಹೆಸರು ಅನ್ವಯಿಸುತ್ತದೆ. ಟರ್ಟಲ್ ಎಂಬುದು ಈ ಪದದ ಇಂಗ್ಲಿಷ್ ಸಮಾನಾರ್ಥಕ. ಟೆರ್ರಾಪಿನ್ ಎಂಬುದು 16ನೆಯ ಶತಮಾನದ ನಾವಿಕರು ಉಷ್ಣವಲಯದ, ಅದರಲ್ಲೂ ಅಮೆರಿಕಾ ದೇಶದ ಸಿಹಿ ನೀರಿನ ಆಮೆಗಳಿಗಿಟ್ಟ ಹೆಸರು. ಟಾರ್ಟಾಯ್ಸ್ ಎಂಬ ಹೆಸರು ನೆಲವಾಸಿ ಆಮೆಗಳಿಗೂ ಟರ್ಟಲ್ ಎಂಬುದು ಕಡಲವಾಸಿ ಅಥವಾ ಹೆಚ್ಚು ಕಾಲವನ್ನು ಸಿಹಿನೀರಿನಲ್ಲಿ ಕಳೆಯುವ ಆಮೆಗಳಿಗೂ ಅನ್ವಯಿಸುತ್ತದೆ. ಕೆಲವು ಅಳಿವೆಗಳಲ್ಲಿಯೂ ವಾಸಿಸಬಲ್ಲವು. ಈ ಗಣಕ್ಕೆ ಕಿಲೋನಿಯಾ ಎಂದು ಕರೆಯುತ್ತಾರೆ. ಆ ಪ್ರಾಣಿಗಳೆಲ್ಲಾ ಹಲ್ಲಿಲ್ಲದ ಸರೀಸೃಪಗಳು. ಚೆನ್ನಾಗಿ ಬೆಳೆದಿರುವ ಕಾಲುಗಳೂ ಮೂಳೆಯ ಹಲಗೆಗಳಿಂದ ನಿರ್ಮಿತವಾದ ಬೆನ್ನಿನ ಮತ್ತು ಹೊಟ್ಟೆಯ ಕಡೆ ಚಿಪ್ಪುಗಳೂ ದೊಡ್ಡದಾದ ಮತ್ತು ಅಲುಗಾಡದಂತೆ ಕುಳಿತಿರುವ ಕ್ವಾಡ್ರೇಟ್ ಮೂಳೆಯೂ ಇವೆ. ಮೊಂಡಕಾಲು, ಮೊನಚಾದ ನಖಗಳಿವೆ. ಗುದದ್ವಾರ ಉದ್ದನಾಗಿದೆ. ಮಿಥುನಾಂಗ ದ್ವಂದ್ವವಾಗಿಲ್ಲ.

ಇಡೀ ಚಿಪ್ಪು ಬೆನ್ನುಕಡೆ ಉಬ್ಬಿದ ಕ್ಯಾರಾಪೇಸ್ ಮತ್ತು ಹೊಟ್ಟೆಕಡೆ ಚಪ್ಪಟೆಯಾದ ಪ್ಲಾಸ್ಟ್ರಾನ್‍ನಿಂದ ಕೂಡಿದೆ. ಕ್ಯಾರಾಪೇಸ್ ಕ್ರಮವಾದ ಪಂಕ್ತಿಗಳಾಗಿ ಜೋಡಿಸಲ್ಪಟ್ಟ ಎಲುಬುಗಳಿಂದಾಗಿ ಚರ್ಮದ ಹೊದಿಕೆ ಹೊಂದಿದೆ. 
ಸಾಧಾರಣವಾಗಿ ಕೀಲೋನಿಯಾಗಳಲ್ಲಿ ಅಸ್ಥಿಮಯ ಚಿಪ್ಪು, ದೊಡ್ಡ ದೊಡ್ಡ ಫಲಕಗಳಾಗಿ ವಿಭಜಿಸಲ್ಪಟ್ಟು ಗಟ್ಟಿಯಾದ ಪಟಲಗಳಿಂದ ಆವರಿಸಿದೆ. ಇದೇ ಆಮೆಯ ಚಿಪ್ಪು. ಕೊಂಬಿನ ಈ ಪಟಲಗಳು ಕೆಳಗಿರುವ ಎಲಬುಗಳಿಗೆ ಸಂಖ್ಯೆಯಲ್ಲಾಗಲೀ ವಿಸ್ತಾರದಲ್ಲಾಗಲೀ ಹೊಂದಿಕೊಂಡಿಲ್ಲ. ಆದರೂ ಜೋಡಣೆಗಳಲ್ಲಿ ಕೊಂಚ ಮಟ್ಟಿಗೆ ಹೋಲಿಕೆಯುಂಟು. ಒಂದು ಬೆನ್ನೆಲುಬಿನ ಸಾಲು, ಒಂದು ಜೋಡಿ ಪಕ್ಕೆಗಳ ಸಾಲು ಮತ್ತು ಒಂದು ಜೋಡಿ ಅಂಚಿನ ಸಾಲು ಈ ರೀತಿ ಹೊಂದಿಕೊಂಡಿವೆ. 
ತಲೆ, ಕತ್ತು, ಬಾಲ ಮತ್ತು ಕಾಲುಗಳ ಚರ್ಮ ಮೆತ್ತಗೂ ನುಣುಪಾಗಿಯೂ ಇದೆ, ಇವು ಹುರುಪೆಯಿಂದಾವೃತವಾಗಿವೆ.
ಕೀಲೋನಿಯಾಗಳಲ್ಲಿ ಸುಮಾರು 200 ಪ್ರಭೇದಗಳಿವೆ. ಅವುಗಳಲ್ಲಿ ಸಿಹಿ ನೀರಿನವೇ ಹೆಚ್ಚು. ಸಾಧಾರಣವಾಗಿ ಅವು ಉಷ್ಣವಲಯದ ತೀರ ಪ್ರದೇಶಗಳಲ್ಲಿ ಇರುವುದು ಹೆಚ್ಚು. ಸಮುದ್ರದ ಆಮೆಗಳೂ ಉಷ್ಣವಲಯದಲ್ಲಿಯೇ ವಾಸಿಸುವುವು. ಬಂಜರು ಪ್ರದೇಶಗಳಲ್ಲೂ ಅತಿ ಎತ್ತರ ಜಾಗಗಳಲ್ಲೂ ಅವು ಬದುಕಲಾರವು.

   	
ಆಮೆಗಳ ಜೀವನ ರೀತಿಯಲ್ಲಿ ವೈವಿಧ್ಯ ಕಂಡುಬರುತ್ತದೆ. ಕೆಲವು ಯಾವಾಗಲೂ ಭೂಮಿಯ ಮೇಲೆ ವಾಸಿಸುವುವು; ಅವುಗಳ ಕಾಲುಗಳು ಮೊಂಡಾಗಿದ್ದು,  ಮೊದಡಾದ ನಖಗಳುಂಟು. ಇನ್ನು ಕೆಲವು ನೆಲದ ಮೇಲೂ ನೀರಿನಲ್ಲೂ ವಾಸಿಸಬಲ್ಲವು. ಮತ್ತೆ ಕೆಲವು ಯಾವಾಗಲೂ ನೀರಿನಲ್ಲಿ ಸೀನೀರಿರುವ ಸಮುದ್ರದಲ್ಲಿ ಇರುವುವು. ಸೀ ನೀರಿನ ಪ್ರಾಣಿಗಳ ಕಾಲು ನಖಗಳನ್ನು ಹೊಂದಿದ್ದು ಪರೆಯಿಂದ ಕೂಡಿ ಜಾಲಪಾದದಂತಿವೆ.

    	ಕೀಲೋನಿಯಗಳು ಹಗಲಲ್ಲಿ ಸಂಚರಿಸುವುವು. ಮೊಟ್ಟೆಯಿಡುವಾಗ ರಾತ್ರಿಯೂ ಓಡಾಡುತ್ತವೆ. ಭೂಚರ ಆಮೆಗಳು ಮಂದಗಾಮಿಗಳು; ಸಾಮಾನ್ಯವಾಗಿ ನೀರಿನಲ್ಲಿ ವಾಸಮಾಡುವುವು. ಆಹಾರ ಹುಡುಕುವಾಗಲೂ ಶತ್ರುಗಳು ಬಂದಾಗಲೂ ಬಹಳ ವೇಗವಾಗಿ ಚಲಿಸಬಲ್ಲವು. ಕೀಲೋನಿಯಗಳು ಸಾಧಾರಣವಾಗಿ ಒಂದೇ ಪ್ರದೇಶದಲ್ಲಿ ವಾಸಿಸುವವು. ಸಮುದ್ರ ಪ್ರಾಣಿಗಳು ಸ್ಥಳದಿಂದ ಸ್ಥಳಕ್ಕೆ ವಲಸೆ ಹೋಗುವುವು. ಶೀತವಲಯದ ಪ್ರಾಣಿಗಳು ಹಿಮಶಯನ ಮಾಡುತ್ತವೆ. 

   	ಭೂಚರ ಆಮೆಗಳೂ ಕೆಲವು ಸೀನೀರಿನ ಆಮೆಗಳೂ ಕೆಲವು ಸಮುದ್ರದ ಆಮೆಗಳೂ ಸಸ್ಯಹಾರಿಗಳು; ಮಿಕ್ಕವು ಮೀನು, ಕಪ್ಪೆ, ಮೃದ್ವಂಗಿ ಮತ್ತಿತರ ಜಲಚರ ಪ್ರಾಣಿಗಳನ್ನು ತಿನ್ನುತ್ತವೆ. 

    	ಕೀಲೋನಿಯಗಳು ಅಂಡಜಗಳು, ಮೊಟ್ಟೆ ಚಿಪ್ಪು ಗಟ್ಟಿಯಾಗಿದ್ದು ಕೊಂಚ ಉದ್ದನಾಗಿರುತ್ತದೆ; ಸಮುದ್ರದ ಆಮೆಯ ಮೊಟ್ಟೆ ದುಂಡಗಿರುತ್ತದೆ.

    	ಗರುಡ ಮೂಗಿನ ಆಮೆ: ಇದು ಕೀಲೋನಿಯ ಉಪವರ್ಗಕ್ಕೆ ಸೇರಿದೆ. ಇದರ ವೈಜ್ಞಾನಿಕ ಹೆಸರು ಕೀಲೋನ್ ಇಂಬ್ರಿಕೇಟ್. ಕಾಲು ಎರಡು ನಖಗಳಿಂದ ಕೂಡಿದ್ದು ಬೆನ್ನು ಫಲಕಗಳು ನಾಡು ಹೆಂಚುಗಳ ಹಾಗೆ ಜೋಡಣೆಯಾಗಿವೆ. ಇದು ಮಾಂಸಹಾರಿ. ಈ ಪ್ರಾಣಿಯ ಚಿಪ್ಪು ಮಾರುಕಟ್ಟೆಯಲ್ಲಿ ಬಹಳ ಆಕರ್ಷಣೀಯ ವಸ್ತು.
ವರ್ಣರಂಜಿತ ಆಮೆ : ಕ್ರೈಸೆಮಿಸ್ ಪಿಕ್ಟ್ ಎಂಬ ಹೆಸರುಳ್ಳ ವರ್ಣರಂಜಿತ ಟೆರ್ರಾಪಿನ್ ಆಮೆ ಅಮೆರಿಕ ದೇಶದ ವಾಸಿ. ಚಿಪ್ಪು ಬಹಳ ನಯವಾಗಿದ್ದು ಸ್ವಲ್ಪ ಮಟ್ಟಿಗೆ ಚಪ್ಪಟೆಯಾಗಿದೆ. ಮೇಲ್ಮೈ ಬಣ್ಣ ಕಪ್ಪು ಮಿಶ್ರಿತ ಕಂದು. ಬೆನ್ನು ಮತ್ತು ಪಾಶ್ರ್ವಗಳಲ್ಲಿರುವ ಫಲಕಗಳ ಮೇಲೆ ಪೀತವರ್ಣದ ರೇಖೆಗಳನ್ನು ಕಾಣಬಹುದು. 3 - 4 ಕಪ್ಪು ಬಣ್ಣದ ಅಡ್ಡ ಪಟ್ಟೆಗಳು ಇವೆ. ದೇಹದ ಒಳಭಾಗಗಳೂ ಕೂಡ ವರ್ಣ ವಿನ್ಯಾಸವನ್ನು ಹೊಂದಿವೆ. ತಲೆಯಲ್ಲಿ ಕಣ್ಣಿನ ಹಿಂಬದಿಯಲ್ಲಿ ಎರಡು ಹಳದಿ ಬಣ್ಣದ ಚುಕ್ಕೆಗಳಿವೆ.

(ಎಂ.ಡಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ